ಇಡೀ ವಿಶ್ವದಾದ್ಯಂತ ಕೋರೋನಾ ವೈರಸ್ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಎಲ್ಲಾ ರಾಷ್ಟ್ರಗಳು ಲಾಕ್ ಡೌನ್ ಘೋಷಣೆಯನ್ನು ಮಾಡಿ ಜನತೆಯನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದೆ. ಇದರ ಜೊತೆಗೆ ಜನರಲ್ಲಿ ಕೆಲವು ಜಾಗೃತಿ ಮೂಡಿಸುವಂತಹ ಅಂಶಗಳನ್ನು ಕೂಡ ನೀಡಲಾಗಿದೆ. ಅದರಲ್ಲಿ ಪ್ರಮುಖವಾದ್ದು ಸಾಮಾಜಿಕ ಅಂತರವನ್ನು 3 ಅಡಿಗಳಷ್ಟು ಕಾಪಾಡಿಕೊಳ್ಳಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿತ್ತು. ಆದರೆ ಇತ್ತೀಚೆಗೆ ಬಂದಿರುವ ಸಂಶೋಧಕರ ವರದಿಯ ಪ್ರಕಾರ ಕೊರೋನಾ ವೈರಸ್ ಸುಮಾರು 13 ಅಡಿಗಳಷ್ಟು ದೂರದ ವರೆಗೆ ಹರಡುತ್ತದೆ ಎಂಬ ವರದಿ ಲಭ್ಯವಾಗಿದೆ..
ಹೌದು, ಕೋವಿಡ್-19 ರೋಗಿಯಿಂದ 13 ಅಡಿ (4ಮೀಟರ್ )ದೂರದವರೆಗೂ ಗಾಳಿಯಲ್ಲಿ ಕೊರೋನಾ ವೈರಸ್ ಹರಡಲಿದೆ ಎಂಬುದನ್ನು ಸಂಶೋಧಕರ ವರದಿಯೊಂದರಲ್ಲಿ ತಿಳಿಸಲಾಗಿದ್ದು, ಪ್ರಸ್ತುತವಿರುವ ಮಾರ್ಗಸೂತ್ರದ ಎರಡುಪಟ್ಟು ಸಾರ್ವಜನಿಕರು ತಮ್ಮ ನಡುವೆ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ.
ಚೀನಾದ ಸಂಶೋಧಕರು ನಡೆಸಿರುವ ಸಂಶೋಧನೆಯ ಪ್ರಾಥಮಿಕ ಫಲಿತಾಂಶ ಅಮೆರಿಕಾದ ಕಾಯಿಲೆಗಳು ನಿಯಂತ್ರಣ ಮತ್ತು ತಡೆ ಕೇಂದ್ರದ ಜರ್ನಲ್ ವೊಂದರಲ್ಲಿ ಶುಕ್ರವಾರ ಪ್ರಕಟಗೊಂಡಿದೆ. ರೋಗವು ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಸಂಶೋಧಕರು ಚರ್ಚೆ ನಡೆಸಿದ್ದು,ಈ ದೂರದಲ್ಲಿ ಸಣ್ಣ ಪ್ರಮಾಣದ ವೈರಸ್ ಗಳು ಸೋಂಕಿಗೆ ಅಗತ್ಯವಾಗಿರುವುದಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ.
ಬಿಜೀಂಗ್ ನ ಮಿಲಿಟರಿ ವೈದ್ಯಕೀಯ ವಿಜ್ಞಾನಗಳ ಅಕಾಡೆಮಿಯ ತಂಡದ ನೇತೃತ್ವದಲ್ಲಿನ ಸಂಶೋಧಕರ ತಂಡ, ವುಹಾನ್ ನ ಹುಶೋಶೆನ್ ಆಸ್ಪತ್ರೆಯ ಕೋವಿಡ್-19 ವಾರ್ಡ್ ಹಾಗೂ ತುರ್ತು ನಿಗಾ ಘಟಕದಿಂದ ಗಾಳಿಯ ಮಾದರಿಯಲ್ಲಿ ಪರೀಕ್ಷೆಯನ್ನು ನಡೆಸಿದ್ದಾರೆ. ಇದಕ್ಕಾಗಿ ಫೆಬ್ರವರಿ 19 ಮತ್ತು ಮಾರ್ಚ್ 2 ರ ನಡುವೆ ಒಟ್ಟು 24 ರೋಗಿಗಳನ್ನು ಆಸ್ಪತ್ರೆಯಲ್ಲಿ ಇರಿಸಿದ್ದರು.
ವಾರ್ಡಿನ ಮಹಡಿಯಲ್ಲಿ ವೈರಸ್ ಗಳು ಹೆಚ್ಚು ಕೇಂದ್ರಿಕೃತವಾಗಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಅಲ್ಲದೇ ಹಾಗಾಗ್ಗೆ ಮುಟ್ಟುವ ಕಂಪ್ಯೂಟರ್ ಮೌಸ್, ಕಸದ ಬುಟ್ಟಿಗಳು, ಬೆಡ್ ಗಳು, ಬಾಗಿಲುಗಳ ಮೇಲ್ಮೈಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ವೈರಸ್ ಗಳು ಇರುವುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.
ಐಸಿಯುನಲ್ಲಿರುವ ವೈದ್ಯಕೀಯ ಸಿಬ್ಬಂದಿಯ ಶೂಗಳ ಕೆಳಬಾಗದಲ್ಲೂ ವೈರಸ್ ಕಂಡುಬಂದಿವೆ. ಇವುಗಳು ಉತ್ಪತ್ತಿಯಾದಾಗ ಹಲವು ಗಂಟೆಗಳ ಕಾಲ ಗಾಳಿಯಲ್ಲಿ ಇರಲಿದ್ದು, ಕೆಮ್ಮಿದಾಗ ಅಥವಾ ಸೀನಿದಾಗ ಸೆಕೆಂಡ್ ನಲ್ಲಿಯೇ ನೆಲದ ಮೇಲೆ ಬೀಳಲಿವೆ. ರೋಗಿಗಳಿಂದ 13 ಅಡಿಗಳ ಹತ್ತಿರ ಅಥವಾ ಕೆಳಗಿನವರೆಗೂ ಈ ವೈರಸ್ ಗಳು ಗಾಳಿಯಲ್ಲಿ ಕೇಂದ್ರಿಕೃತವಾಗಿರುತ್ತವೆ ಎಂಬುದು ತಿಳಿದುಬಂದಿದೆ.
ಉಸಿರಾಟ ಅಥವಾ ಮಾತನಾಡುವಾಗಲು ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಹೊರ ಹೋಗುವ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಮುಖವನ್ನು ಮಾಸ್ಕ್ ಗಳಿಂದ ಮುಚ್ಚಿಕೊಳ್ಳುವ ಮೂಲಕ ಸಾಕಷ್ಟು ಮುಂಜಾಗ್ರತೆ ವಹಿಸುವಂತೆ ಅಮೆರಿಕಾದ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ
]]>